ಪ್ರಾತಃ ಸ್ಮರಣೀಯರಾದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಹಾಗು ಅವಿಭಜಿತ ಮೈಸೂರು ಜಿಲ್ಲೆಯ ಎಲ್ಲ ಪೂಜ್ಯ ಶ್ರೀಗಳವರ ಸಂಕಲ್ಪದಂತೆ ಮೈಸೂರು ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿಯು 1979 ರಲ್ಲಿ ಅಸ್ತಿತ್ವಕ್ಕೆ ಬಂದಿತು.
1997 ರಲ್ಲಿ ಮೈಸೂರು ಜಿಲ್ಲೆ ವಿಭಜನೆಯಾದ ನಂತರ ಇದಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿ ಎಂದು ಮರುನಾಮಕರಣ ಮಾಡಲಾಯಿತು. ಮಠಾಧೀಶರ ನಡುವೆ ಪರಸ್ಪರ ಸಾಮರಸ್ಯ ಮೂಡಿಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು, ಪ್ರಚಲಿತ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದು, ಜನತೆಯಲ್ಲಿ ಧಾರ್ಮಿಕ ಜಾಗೃತಿಯನ್ನುಂಟುಮಾಡುವುದು ಹಾಗೂ ಸಮಾಜದಲ್ಲಿ ನವಚೈತನ್ಯವನ್ನುಂಟುಮಾಡುವುದು ಮೊದಲಾದವು ಗೋಷ್ಠಿಯ ಮುಖ್ಯ ಧ್ಯೇಯೋದ್ದೇಶಗಳಾಗಿವೆ.
ಗೋಷ್ಠಿಯು ಎರಡು ಜಿಲ್ಲೆಗಳ ವಿವಿಧ ಮಠಗಳಲ್ಲಿ ಆಗಿಂದಾಗ್ಗೆ ಸಮಾವೇಶಗೊಂಡು ಚರ್ಚಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿವೆ ಧರ್ಮಪ್ರಸಾರ, ಕಿರು ಹೊತ್ತಿಗೆಗಳ ಪ್ರಕಟಣೆ, ಶಿವಾಧೀಕ್ಷಾಸಂಸ್ಕಾರ, ಧಾರ್ಮಿಕ ಶಿಕ್ಷಣ ಶಿಬಿರ, ಸಾಮೂಹಿಕ ವಿವಾಹ, ವಿಚಾರಸಂಕಿರಣಗಳನ್ನು ಏರ್ಪಡಿಸುವುದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವುದು ಇವೇ ಮುಂತಾದ ಜನಪರ ಕಾರ್ಯಕ್ರಮಗಳನ್ನು ಗೋಷ್ಠಿಯಿಂದ ಯಶಸ್ವಿಯಾಗಿ ನೆರವೇರಿಸಲಾಗುತ್ತಿದೆ.
2007 ರಲ್ಲಿ ಮೈಸೂರು ಶ್ರೀ ಹೊಸಮಠದಲ್ಲಿ “ವೀರಶೈವ/ಲಿಂಗಾಯತ ಮಠಗಳು – ಒಂದು ಅವಲೋಕನ”, 2009 ರಲ್ಲಿ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ “ವೀರಶೈವ/ಲಿಂಗಾಯತ ಸಮಾಜ – ಒಂದು ಅವಲೋಕನ”, 2011 ರಲ್ಲಿ ನಂಜನಗೂಡು ತಾಲ್ಲೂಕು ಸಂಗಮಕ್ಷೇತ್ರದಲ್ಲಿ ತಾತ್ವಿಕ – ಧಾರ್ಮಿಕ ಚಿಂತನೆ (ಪರವಸ್ತು – ಜಗತ್ತು-ಜೀವ – ಸಾಧನ – ಧರ್ಮಾಚರಣೆಗಳು) ಮತ್ತು 2016 ರಲ್ಲಿ ಶ್ರೀ ಸುತ್ತೂರು ಶ್ರೀಕ್ಷೇತ್ರದಲ್ಲಿ “ಶೂನ್ಯಸಂಪಾದನೆಯ ಪ್ರಸಂಗಾನುಭವ” ಹೀಗೆ ಇದುವರೆಗೆ ಒಟ್ಟು ನಾಲ್ಕು ವಿಚಾರಸಂಕಿರಣಗಳು ಜರುಗಿವೆ, ಮೊದಲೆರಡು ವಿಚಾರಸಂಕಿರಣಗಳ ಕೃತಿಗಳು ಲೋಕಾರ್ಪಣೆಯಾಗಿವೆ.
ವೀರಶೈವ/ ಲಿಂಗಾಯತ ಧರ್ಮವನ್ನು ತಾತ್ತ್ವಿಕ ನೆಲಗಟ್ಟಿನಲ್ಲಿ ಅಧ್ಯಯನ ಮಾಡಲು ಬಯಸುವ ಜಿಜ್ಞಾಸುಗಳಿಗೆ ಹಾಗೂ ಅಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿರುವ ಸಾಧಕರಿಗೆ ಅನುಕೂಲವಾಗುವಂತೆ ಕೈವಲ್ಯ ಸಾಹಿತ್ಯದ ತತ್ತ್ವ ಸಿದ್ಧಾಂತಗಳನ್ನು ಚರ್ಚೆಗೆ ಒಳಪಡಿಸಿ ಅದರಿಂದ ಹೊರಹೊಮ್ಮುವ ಫಲಶ್ರುತಿಯನ್ನು ಪರಸ್ಪರ ಹಂಚಿಕೊಳ್ಳಬೇಕೆಂಬ ಆಶಯದೊಂದಿಗೆ ಈ ವಿಚಾರಸಂಕಿರಣವನ್ನು ಏರ್ಪಡಿಸಲಾಗಿದೆ