ಶ್ರೀ ಕುದೇರು ಮಠ

ವಿಳಾಸ:

ಷ.ಬ್ರ.ಸ್ವ ಶ್ರೀ ಗುರುಶಾಂತಸ್ವಾಮಿಗಳವರು, ಷ.ಬ್ರ.ಸ್ವ ಶ್ರೀ ಇಮ್ಮಡಿ ಗುರುಲಿಂಗಸ್ವಾಮಿಗಳವರು, ಶ್ರೀ ಕುದೇರು ಮಠ, ಕೆ.ಆರ್‌. ಮೊಹಲ್ಲಾ, ಬಸವೇಶ್ವರ ರಸ್ತೆ, ಮೈಸೂರು – 570004
ಮೊ. +919731163970,+919844460304

ಮಠದ ವಿವರ:

ಶ್ರೀ ಕುದೇರು ಮಠ, ಮೈಸೂರು

ರಾಜ್ಯದ ಸಾಂಸ್ಕೃತಿಕ ನಗರವೆಂದೇ ಹೆಸರಾಗಿರುವ ಮೈಸೂರು ನಗರದಲ್ಲಿ ಹಾಲಿ ಇರುವ ಹದಿಮೂರು ವೀರಶೈವ ಲಿಂಗಾಯತ ಮಠಗಳಲ್ಲಿ ಈಗಿನ ಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಕುದೇರು ಮಠವೂ ಒಂದಾಗಿದೆ. ಬಲ್ಲ ಮೂಲಗಳ ಪ್ರಕಾರ ಈ ಮಠ ಮೂಲದಲ್ಲಿ ಶ್ರೀ ಪರ್ವತ ಸ್ವಾಮಿಗಳೆಂಬ ಶರಣರ ವಾಸಸ್ಥಳವಾಗಿತ್ತು. ಬಸವೇಶ್ವರ ರಸ್ತೆಗೆ ಹಿಂದೆ ದೀವಟಿಗೆ ಬೀದಿ ಎಂಬ ಹೆಸರಿತ್ತು. ಇದರ ಹಿಂಭಾಗವೇ ಮಹಾತ್ಮ ಶ್ರೀ ಗುರುಮಲ್ಲೇಶ್ವರರ ಕುಟುಂಬದ ಗುರುಗಳಾದ ಶ್ರೀ ಶರಣಪ್ಪಸ್ವಾಮಿಗಳಿದ್ದ ಚೌಕಿ ಮಠ ಹಾಗೂ ಅದರ ಪಕ್ಕ ಗುರುಮಲ್ಲೇಶ್ವರರಿಗೆ ಕಂತೆಭಿಕ್ಷದ ಕಾಯಕ ಮಾಡುವಂತೆ ತಿಳಿಸಿ, ಶಿವಯೋಗ ಸಾಧನೆಗೆ ಮಾರ್ಗದರ್ಶನ ಮಾಡಿದ್ದ ಶ್ರೀ ಬೆತ್ತಲೆಗುಂಡೆ ಸ್ವಾಮಿಗಳಿದ್ದ ಶ್ರೀ ಮಹಲಿಂಗೇಶ್ವರ ಮಠವಿದೆ. ಇದಲ್ಲದೆ, ಇದೇ ರಸ್ತೆಯಲ್ಲಿ ಶ್ರೀ ಸಾಂಬಪ್ಪನವರ ಮಠವೂ ಇದೆ.

ಪರ್ವತಸ್ವಾಮಿಗಳು ವಾಸವಿದ್ದ ಸ್ಥಳವೇ ಇಂದು ಕುದೇರು ಮಠವಾಗಿ ಮೈಸೂರು ನಗರದಲ್ಲಿ ತನ್ನ ಇತಿಮಿತಿಯಲ್ಲಿ ಕಾಯಕ ದಾಸೋಹ ಮಾಡುತ್ತಾ ತನ್ನದೇ ಆದ ಹೆಸರು ಮಾಡಿದೆ. ಈ ಮಠಕ್ಕೆ ಕುದೇರು ಮಠವೆಂದು ನಾಮಕರಣಗೊಂಡಿರುವ ಹಿನ್ನೆಲೆಯಲ್ಲಿ ಒಂದು ಕತೆಯಿದೆ. ಅದೇನೆಂದರೆ, ಸುಮಾರು ಎರಡುನೂರು ವರುಷಗಳ ಹಿಂದೆ ಈಗಿನ ಕುದೇರು ಮಠವಿರುವ ಸ್ಥಳದಲ್ಲಿ ವಯೋವೃದ್ಧರಾದ ಪರ್ವತಸ್ವಾಮಿಗಳೆಂಬ ಶರಣರು ವಾಸವಾಗಿದ್ದರಂತೆ. ಬಸವಾದಿ ಶಿವಶರಣರ ತತ್ವಗಳನ್ನು ಮೈಗೂಡಿಸಿಕೊಂಡಿದ್ದ ಇವರು ದಿನಕ್ಕೆ ಒಂದು ಹೊತ್ತು ಮಾತ್ರ ಪ್ರಸಾದ ತೆಗೆದುಕೊಳ್ಳುತ್ತಿದ್ದರಂತೆ. ಅದೂ ಯಾರಾದರೂ ಭಕ್ತರು ಭಕ್ತಿಯಿಂದ ತಂದುಕೊಟ್ಟರೆ, ಇಲ್ಲದಿದ್ದರೆ ನೀರನ್ನೇ ಪ್ರಸಾದವೆಂದು ಸ್ವೀಕರಿಸಿ ತೃಪ್ತಿಪಡುತ್ತಿದ್ದರಂತೆ. ಶ್ರೀಗಳು ಪ್ರತಿನಿತ್ಯ ಪ್ರಾತಃಕಾಲ ದೀವಟಿಗೆ ಬೀದಿಯಿಂದ ಈಗಿನ ಊಟಿ ರಸ್ತೆಯಲ್ಲಿರುವ ಶ್ರೀ ದತ್ತಾಶ್ರಮವಿರುವ ಜಾಗದಲ್ಲಿ ಒಂದು ಕೊಳವಿತ್ತಂತೆ. ಅಲ್ಲಿಗೆ ಹೋಗಿ ಸ್ನಾನ ಮಾಡಿಕೊಂಡು ಬಟ್ಟೆ ಮಡಿಮಾಡಿ ಅನಂತರ ಒಂದು ಬಿಂದಿಗೆ ನೀರನ್ನು ತಲೆಯ ಮೇಲಿಟ್ಟುಕೊಂಡು, ಒಂದು ಚೊಂಬು ನೀರನ್ನು ಒಂದು ಕೈಯಲ್ಲಿಡಿದು, ಮತ್ತೊಂದು ಕೈಯಲ್ಲಿ ಸಗಣಿಯನ್ನು ತೆಗೆದುಕೊಂಡು ತಮ್ಮ ಮಠಕ್ಕೆ ತರುತ್ತಿದ್ದರಂತೆ. ನೀರಿನ ಪಾತ್ರೆಗಳನ್ನು ಮಠದಲ್ಲಿಟ್ಟು, ಮಠದ ಮುಂದೆ ಸಗಣಿ ನೀರನ್ನಿಟ್ಟು ಆನಂತರ ಪೂಜೆಗೆ ಕೂರುತ್ತಿದ್ದರಂತೆ. ಚೊಂಬಿನ ನೀರನ್ನು ಲಿಂಗಪೂಜೆಗೆ ಬಳಸಿ, ಬಿಂದಿಗೆ ನೀರನ್ನು ಕುಡಿಯುತ್ತಿದ್ದರಂತೆ. ಯಾರಾದರೂ ಭಕ್ತರು ಇವರಿಗೆ ಪ್ರಸಾದ ತಂದುಕೊಟ್ಟರೆ ಮೂರು ದಿನಗಳಿಗಾಗುವಷ್ಟನ್ನು ಒಮ್ಮೇಲೆ ಸ್ವೀಕರಿಸುತ್ತಿದ್ದರಂತೆ. ಅನಂತರ ಮೂರುದಿನಗಳ ಕಾಲ ಪ್ರಸಾದವನ್ನೇ ಸ್ವೀಕರಿಸುತ್ತಿರಲಿಲ್ಲವಂತೆ. ಹೆಚ್ಚು ಮಾತನಾಡದ ಮೌನಿಗಳಾದ ಶ್ರೀಗಳು ಧರಿಸುತ್ತಿದ್ದುದು ಕೇವಲ ಒಂದು ತುಂಡು ಪಂಚೆ ಮಾತ್ರ. ಅಷ್ಟು ಸರಳ ಜೀವಿಗಳವರು. ಸದಾ ‘ಶಂಭೋ’ ಎಂದು ಶಿವನಾಮಸ್ಮರಣೆ ಮಾಡುತ್ತಿದ್ದುದು ಇವರ ಹವ್ಯಾಸ. ಸಮಾಜದ ಒಳಿತಿಗಾಗಿ ಸದಾ ಶಿವನಾಮಸ್ಮರಣೆ ಮಾಡುತ್ತಿದ್ದ ಶ್ರೀಗಳು ವಯೋವೃದ್ಧರಾದ್ದರಿಂದ ಕೆಲ ವರ್ಷಗಳ ನಂತರ ಸಹಜವಾಗಿ ಹಾಸಿಗೆ ಹಿಡಿಯುತ್ತಾರೆ. ಆಗ ಇವರ ಸೇವೆಗೆ ಆಕಸ್ಮಿಕವಾಗಿ ಬಂದವರೇ ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಸಂತೆಮರಹಳ್ಳಿ ಹೋಬಳಿಯ ಕುದೇರು ಗ್ರಾಮದ ಮೂಡಲು ಮಠ ನಿವಾಸಿಗಳಾಗಿದ್ದ ಶ್ರೀಮತಿ ಚನ್ನವೀರಮ್ಮ, ಶ್ರೀ ಗುರುಸ್ವಾಮಿ, ಶ್ರೀ ಸದಾಶಿವಸ್ವಾಮಿ ಹಾಗೂ ಶ್ರೀ ಮಲ್ಲಿಕಾರ್ಜುನ ದೇವರು ಕುಟುಂಬದವರು.

ಕಾರಣಾಂತರದಿಂದ ಕುದೇರಿನಿಂದ ಮೈಸೂರಿಗೆ ಬಂದ ಇವರಿಗೆ ತಮ್ಮ ಕೆಲಸವಾದ ಬಳಿಕ ಹಸಿವಾದಾಗ ಕಡಲೆಪುರಿ ತಿಂದು ನೀರನ್ನು ಕುಡಿದು ಉಳಿದುಕೊಳ್ಳಲು ಸ್ಥಳವನ್ನು ಹುಡುಕಾಡುತ್ತಿರಬೇಕಾದರೆ ಯಾರೋ ಹಿರಿಯರು ದೀವಟಿಗೆ ಬೀದಿಯಲ್ಲಿರುವ ಪರ್ವತಸ್ವಾಮಿಗಳ ಬಳಿ ಹೋಗಲು ಮಾರ್ಗದರ್ಶನ ಮಾಡಿದರಂತೆ. ಅಂತೆಯೇ, ಇವರು ಅಲ್ಲಿಗೆ ಹೋದಾಗ ಒಂದು ನಾಡಂಚಿನ ಮನೆಯಲ್ಲಿ ಒಂದು ಚಾಪೆಯ ಮೇಲೆ ವಯೋವೃದ್ಧರಾದ ಶರಣರು ಮಲಗಿರುವುದನ್ನು ನೋಡಿ, ಅವರ ಪಾದಕ್ಕೆ ನಮಸ್ಕರಿಸಿ ತಮಗೆ ತಮ್ಮ ಮಠದಲ್ಲಿ ಸ್ವಲ್ಪ ದಿನ ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರಂತೆ. ಆಗ ಶ್ರೀಗಳು ಇವರ ಪರಿಸ್ಥಿತಿ ನೋಡಿ ತಮ್ಮ ಮಠದಲ್ಲಿ ಉಳಿದುಕೊಳ್ಳಲು ಒಪ್ಪಿಗೆ ನೀಡುತ್ತಾರೆ. ಆಗ ಈ ಕುಟುಂಬದವರು ಅಲ್ಲಿ ಉಳಿದುಕೊಳ್ಳಲು ತೀರ್ಮಾನಿಸುತ್ತಾರೆ. ಅಂತೆಯೇ ಗುರುಗಳ ಉಪಚಾರವನ್ನು ಮಾಡಲು ತೊಡಗುತ್ತಾರೆ. ಪ್ರಾಯಶಃ ಈ ಕುಟುಂಬ ತಮ್ಮ ಕಡುಬಡತನದ ಪರಿಣಾಮವೋ ಏನೋ ಇಲ್ಲಿಯೇ ನೆಲೆನಿಲ್ಲಬೇಕಾಯಿತು.

ನಾಲ್ಕಾರು ವರ್ಷಗಳ ಬಳಿಕ ಪರ್ವತಸ್ವಾಮಿಗಳು ಭಗವಂತನ ಸಾಯುಜ್ಯವನ್ನು ಸೇರುವ ಸಂದರ್ಭ ಬಂದಿತು ಎಂದು ಕಾಣುತ್ತದೆ. ಆಗ ಶ್ರೀಗಳು ಈ ಕುಟುಂಬವನ್ನು ಕುರಿತು “ನೀವು ಇಷ್ಟು ಕಾಲ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ಆ ಭಗವಂತನೇ ನನ್ನ ಸೇವೆಗೆ ತಮ್ಮನ್ನು ಕಳುಹಿಸಿರಬಹುದು ಎಂದು ಕಾಣುತ್ತದೆ. ನಿಮಗೆ ಕೊಡಲು ನನ್ನಲ್ಲಿ ಯಾವುದೇ ಹಣವಾಗಲಿ, ಬಂಗಾರವಾಗಲಿ ಇಲ್ಲ. ಆದುದರಿಂದ ನಾನು ವಾಸ ಮಾಡುತ್ತಿರುವ ಈ ಸ್ಥಳವನ್ನು ನಿಮಗೆ ಬರೆದುಕೊಡುತ್ತೇನೆಂದು” ಎಂದು ಹೇಳಿದರಂತೆ. ಅಂತೆಯೇ ಗುರುಗಳು ಕೊಟ್ಟ ಮಾತಿನಂತೆ ತಮ್ಮ ಆ ಜಾಗವನ್ನು ಕುದೇರಿನ ಈ ಕುಟುಂಬದವರಿಗೆ ಬರೆದುಕೊಟ್ಟರಂತೆ. ಶ್ರೀಗಳು ಲಿಂಗೈಕ್ಯರಾದಾಗ ಅವರ ಸಂಸ್ಕಾರ, ಪುಣ್ಯಾರಾಧನೆ ಎಲ್ಲವನ್ನೂ ಈ ಕುಟುಂಬದವರೇ ಮಾಡಿದರಂತೆ. ಶ್ರೀ ಪರ್ವತಸ್ವಾಮಿಗಳು ಲಿಂಗ್ಯಕ್ಯರಾದ ಬಳಿಕ ಕುದೇರಿನ ಚೆನ್ನವೀರಮ್ಮನವರ ಕುಟುಂಬ ಸಣ್ಣಪುಟ್ಟ ಕಾಯಕ ಮಾಡಿಕೊಂಡು ಅಲ್ಲಿಯೇ ಕೆಲವು ವರ್ಷಗಳ ಕಾಲ ವಾಸವಾಗಿದ್ದರು.

ದೇವನೂರಿನಲ್ಲಿರುವ ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೂಜ್ಯಶ್ರೀ ತೋಂಟದಾರ್ಯ ಸ್ವಾಮಿಗಳು ಶ್ರೀಮಠದ ಗುರುಪರಂಪರೆಯ ಮೂರನೆಯ ಸ್ವಾಮಿಗಳು. ಗುರುಮಲ್ಲೇಶ್ವರರ ನೇರಶಿಷ್ಯರು, ಒಡನಾಡಿಗಳು ಹಾಗೂ ಅವರ ಕೃಪೆಗೆ ಪಾತ್ರರಾಗಿದ್ದ ಶ್ರೀ ಭಿಕ್ಷದ ರಾಚಪ್ಪಸ್ವಾಮಿಗಳವರ ಕರಕಮಲಸಂಜಾತರು. ಶ್ರೀಗಳು ಆಗಿನ ಮೈಸೂರು ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಸಂಚರಿಸಿ ಜನಸಾಮಾನ್ಯರಿಗೆ ಧರ್ಮಬೋಧನೆ ಮಾಡುತ್ತಿದ್ದರು. ದೇವನೂರು ಮಠದ ಅಭಿವೃದ್ಧಿಯಲ್ಲಿ ಇವರ ಪಾಲು ಸಾಕಷ್ಟಿದೆ. ಶ್ರೀಗಳು ಮೈಸೂರಿಗೆ ಬಂದಾಗ ಸಾಮಾನ್ಯವಾಗಿ ಇಲ್ಲಿನ ಕಡ್ಲೆಪುರಿ ನಂಜುಂಡಪ್ಪನವರ ಮನೆ ಅಥವಾ ಡಾ. ಅಣ್ಣಾಜಪ್ಪ ಎಂಬ ಭಕ್ತರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಇದು ಹೀಗೆಯೇ ಹಲವಾರು ವರುಷ ನಡೆದಿತ್ತು. ಒಮ್ಮೆ ಗುರುಗಳು ತಾವು ಮೈಸೂರಿಗೆ ಬಂದಾಗ ಉಳಿದುಕೊಳ್ಳಲು ಹಾಗೆಯೇ ತಮ್ಮ ಮಠದಿಂದ ಒಂದು ವಿದ್ಯಾರ್ಥಿನಿಲಯವನ್ನು ಆರಂಭಿಸಲು ತೀರ್ಮಾನಿಸಿದರು. ತೋಂಟದಾರ್ಯ ಸ್ವಾಮಿಗಳವರು ತಮ್ಮ ಶ್ರೀಮಠದ ವತಿಯಿಂದ ದೇವನೂರು, ಮೈಸೂರು ಹಾಗೂ ಕೊಳ್ಳೇಗಾಲಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿ ಗ್ರಾಮೀಣ ಬಡ ವೀರಶೈವ ಲಿಂಗಾಯಿತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಕಲ್ಪಿಸಿದ್ದರು. ವಿಶೇಷವಾಗಿ, ಮೈಸೂರಿನಲ್ಲಿ ಆದಷ್ಟು ಬೇಗ ಇದನ್ನು ಮಾಡಬೇಕೆಂದವರೇ ತಮ್ಮ ಮನದಿಂಗಿತವನ್ನು ಕಡ್ಲೆಪುರಿ ನಂಜುಂಡಪ್ಪನವರ ಮನೆಯಲ್ಲಿ ಪ್ರಸ್ತಾಪಿಸಿದರು.

ಕಡ್ಲೆಪುರಿ ನಂಜುಂಡಪ್ಪನವರು ಮಹಾತ್ಮ ಗುರುಮಲ್ಲೇಶ್ವರರ ಕೃಪೆಗೆ ಪಾತ್ರರಾದ ಶಿಷ್ಯರು. ಗುರುಗಳು ಹರಸಿ ಕೊಟ್ಟ ಒಂದು ರೂಪಾಯಿಯಲ್ಲಿ ಕಡ್ಲೆಪುರಿ ವ್ಯಾಪಾರ ಆರಂಭಿಸಿ ಆರ್ಥಿಕವಾಗಿ ಸಾಕಷ್ಟು ಬೆಳೆದವರು. ಇವರ ಮಕ್ಕಳು ಸಹ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಸರು ಮಾಡಿದವರಾಗಿದ್ದಾರೆ. ಆಗ ಮೈಸೂರಿನ ಭಕ್ತರು ತಮ್ಮ ಗುರುಗಳಿಗೆ ಒಂದು ಮನೆಯನ್ನು ನೋಡಲು ಪ್ರಾರಂಭಿಸಿದರು. ಯೋಗಾಯೋಗ ಕೆಲವೇ ದಿನಗಳಲ್ಲಿ ಪರ್ವತಸ್ವಾಮಿಗಳಿದ್ದ ಮನೆ ಮಾರಾಟಕ್ಕಿದೆ ಎಂದು ತಿಳಿದುಬಂತು. ಗುರುಮಲ್ಲೇಶ್ವರರು ತಮ್ಮ ಬಾಲ್ಯ ಮತ್ತು ಯೌವ್ವನವನ್ನು ಕಳೆದ, ಕಂತೆಭಿಕ್ಷದ ಕಾಯಕ, ದಾಸೋಹ ಮಾಡುತ್ತಿದ್ದ ಚೌಕಿ ಮಠ ಹಾಗೂ ಮಹಲಿಂಗೇಶ್ವರ ಮಠಗಳಿರುವೆಡೆಯಲ್ಲಿನ ಮನೆಯೇ ಮಾರಾಟಕ್ಕಿದ್ದುದು ವಿಶೇಷ. ಈ ವಿಷಯವನ್ನು ಭಕ್ತರು ತೋಂಟದಾರ್ಯ ಸ್ವಾಮಿಗಳವರಿಗೆ ತಿಳಿಸಿದರು. ಆಗ ಶ್ರೀಗಳು ಅದನ್ನು ನೋಡಿ ತಾವು ಮೈಸೂರಿಗೆ ಬಂದಾಗ ಉಳಿದುಕೊಳ್ಳಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ಇಲ್ಲೊಂದು ವಿದ್ಯಾರ್ಥಿನಿಲಯ ಅರಂಭಿಸಬಹುದೆಂದು ಭಾವಿಸಿ, ಆಗಬಹುದು, ವ್ಯವಹಾರವನ್ನು ಕುದುರಿಸಿ ಎಂದು ಭಕ್ತರಿಗೆ ತಿಳಿಸಿದರು. ಅಂತೆಯೇ ಅಲ್ಲಿ ವಾಸವಿದ್ದ ಕುದೇರಿನ ಕುಟುಂಬಸ್ಥರಲ್ಲಿ ಈ ವಿಷಯ ತಿಳಿಸಿದಾಗ ಬಹು ಖುಷಿ ಪಟ್ಟು ಒಂದು ಒಳ್ಳೆಯ ಉದ್ದೇಶಕ್ಕೆ ಸ್ವಾಮಿಗಳು ಈ ಸ್ಥಳವನ್ನು ಕೇಳುತ್ತಿದ್ದಾರೆ ನಾವು ಕೊಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಅಂತೆಯೇ ಇದನ್ನು ಶ್ರೀಗಳಿಗೆ ದಾನಪತ್ರ ಮಾಡಿಕೊಡಲು ನಿರ್ಧರಿಸಿದರು. ಆದರೂ ಶ್ರೀಗಳು ಆ ಕುಟುಂಬದವರ ಮುಂದಿನ ಜೀವನಕ್ಕೆ ಅನುಕೂಲವಾಗಲೆಂದು ಮೂರು ಸಾವಿರ ರೂಪಾಯಿಗಳನ್ನು ಕೊಡಲು ನಿರ್ಧರಿಸಿದರಂತೆ. 1942 ಸ್ವಾತಂತ್ರ್ಯಪೂರ್ವದ ಕಾಲ, ಮೂರು ಸಾವಿರ ರೂಪಾಯಿಗಳನ್ನು ಹೊಂದಿಸುವುದು ಕಷ್ಟವಾಯಿತು. ಆಗ ಶ್ರೀಗಳು ಮೊದಲಿಗೆ ಮೇಲಾಜಿಪುರ ಗ್ರಾಮದಲ್ಲಿ ಕಾಣಿಕೆ ಭಿಕ್ಷೆಗೆ ಹೋದಾಗ ಕೇವಲ ಎಪ್ಪತ್ತು ರೂಪಾಯಿಗಳು ಸಂಗ್ರಹವಾಯಿತಂತೆ. ಅನಂತರ ಇನ್ನೂ ಹತ್ತಾರು ಗ್ರಾಮಗಳಲ್ಲಿ ಕಾಣಿಕೆ ಭಿಕ್ಷೆ ಮಾಡಿ ಎರಡು ಸಾವಿರದ ನಾಲ್ಕುನೂರು ರೂಪಾಯಿಗಳನ್ನು ಸಂಗ್ರಹ ಮಾಡಿದರಂತೆ. ಆ ಕುಟುಂಬದವರಿಗೆ ಕೊಡಲು ಇನ್ನೂ ಆರುನೂರು ರೂಪಾಯಿಗಳು ಕೊರತೆ ಆಯಿತು.

ಆ ಸಂದರ್ಭದಲ್ಲಿ ಇಬ್ಬರು ಭಕ್ತರು ತಲಾ ಮೂರುನೂರು ರೂಪಾಯಿಗಳನ್ನು ಗುರುಗಳಿಗೆ ನೀಡಲು ಮುಂದೆಬಂದದ್ದು ವಿಶೇಷ. ಅವರಲ್ಲಿ ಒಬ್ಬರು ಕೊಳ್ಳೇಗಾಲ ತಾಲ್ಲೂಕಿನ (ಈಗಿನ ಹನೂರು ತಾಲ್ಲೂಕಿನ) ಕಾಮಗೆರೆಯ ಕತ್ತರಿ ಬಸಪ್ಪ ಎಂಬುವರು. ಇವರು ಎಂತಹ ಭಕ್ತರೆಂದರೆ ಕಾಮಗೆರೆಯಲ್ಲಿ ಗುರುಮಲ್ಲೇಶ್ವರರೇ ಆರಂಭಿಸಿದ ಒಂದು ಭಿಕ್ಷದ ಮಠವಿದೆ, ಆ ಗ್ರಾಮದವರಿಗೆ ಗುರುಮಲ್ಲೇಶ್ವರರೆಂದರೆ ಪಂಚಪ್ರಾಣ. ಅಂತೆಯೇ ಶ್ರೀಮಠದ ಪರಂಪರೆಗೆ ಅಂದಿನಿಂದ ಇಂದಿನತನಕವೂ ನಡೆದುಕೊಂಡು ಬಂದಿದ್ದಾರೆ. ಗುರುಗಳು ಆರಂಭಿಸಿದ ಮಠಕ್ಕೆ ಒಂದು ನೂತನಕಟ್ಟಡವನ್ನು ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿ, ನಕ್ಷೆ ಬರೆಸಿದಾಗ ಕರಾರುವಕ್ಕಾದ ಹಾಯಕ್ಕೆ ಸ್ವಲ್ಪ ಹೆಚ್ಚಿನ ಜಾಗ ಬೇಕೆಂದು ಬಂತಂತೆ. ಆಗ ಪಕ್ಕದಲ್ಲೇ ವಾಸವಾಗಿದ್ದ ಕತ್ತರಿ ಬಸಪ್ಪನವರು ತಾವು ವಾಸವಿದ್ದ ಮನೆಯಲ್ಲಿ ಅರ್ಧಭಾಗವನ್ನು ಕತ್ತರಿಸಿ ಮಠದ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಗುರುಭಕ್ತರು ಹಾಗೂ ಉದಾರಿಗಳು. ಆ ಕಾರಣಕ್ಕಾಗಿಯೋ ಏನೋ ಇವರಿಗೆ ಕತ್ತರಿ ಬಸಪ್ಪನೆಂದು ಗ್ರಾಮಸ್ಥರು ಕರೆಯುತ್ತಿದ್ದಿರಬೇಕು. ಇವರಿಗೆ ತಮ್ಮ ಗುರುಗಳಾದ ತೋಂಟದಾರ್ಯರಿಗೆ ಮೈಸೂರಿನಲ್ಲಿ ಮನೆ ತೆಗೆದುಕೊಳ್ಳಲು ಹಣದ ಕೊರತೆಯಾಗಿದೆ ಎಂದು ತಿಳಿದಾಗ ಮೂರುನೂರು ರೂಪಾಯಿಗಳನ್ನು ಕೊಡಲು ಮುಂದೆ ಬಂದರಂತೆ. ಆಗ ತೋಂಟದಾರ್ಯರು ತಮ್ಮ ನೆಚ್ಚಿನ ಶಿಷ್ಯರು ಹಾಗೂ ಕೆಸ್ತೂರು ಮಠಾಧ್ಯಕ್ಷರಾದ ಸಿದ್ಧರಾಮ ಸ್ವಾಮಿಗಳವರಿಗೆ ಆ ಹಣವನ್ನು ಪಡೆದುಬರಲು ತಿಳಿಸಿದರಂತೆ. ಅಂತೆಯೇ ಸಿದ್ಧರಾಮ ಸ್ವಾಮಿಗಳು ಸಿ.ಪಿ.ಸಿ. ಬಸ್‌ನಲ್ಲಿ ಎಪ್ಪತ್ತೈದು ಪೈಸೆ ಕೊಟ್ಟು ಕೊಳ್ಳೇಗಾಲ ತನಕ ಹೋಗಿ, ಅಲ್ಲಿಂದ ಹೇಗೋಏನೋ ಕಾಮಗೆರೆ ತಲುಪಿ ಕತ್ತರಿ ಬಸಪ್ಪನವರಿಂದ ಮೂರುನೂರು ರೂಪಾಯಿಗಳನ್ನು ಪಡೆದು ಅಷ್ಟೇ ಜೋಪಾನವಾಗಿ ತಂದು ಗುರುಗಳಿಗೆ ಅರ್ಪಿಸುತ್ತಾರೆ.

ಸ್ವಲ್ಪದಿನಗಳ ನಂತರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವಾಸವಾಗಿದ್ದ ಶ್ರೀಮತಿ ಗುರುಸಿದ್ಧಮ್ಮ ಮತ್ತು ಶ್ರೀ ಮಾದಪ್ಪ ಎಂಬ ಶರಣ ದಂಪತಿಗಳು ವಿಷಯ ತಿಳಿದು ತೋಂಟದಾರ್ಯರಿಗೆ ತಾವು ಸಹ ಮೂರುನೂರು ರೂಪಾಯಿಗಳನ್ನು ಕೊಡಲು ಮುಂದೆ ಬಂದರು. ಇವರು ಅದೆಂತಹ ಗುರುಭಕ್ತರೆಂದರೆ, ಒಮ್ಮೆ ಇವರ ಮನೆಗೆ ದೇವನೂರು ಮಠದ ಶ್ರೀ ಗುರುಭಿಕ್ಷದಾರ್ಯರು ಭೇಟಿ ಕೊಟ್ಟು ಸ್ವಲ್ಪಕಾಲ ಮನೆಯಲ್ಲಿ ಕುಳಿತಿದ್ದು ಪ್ರಸಾದ ಸ್ವೀಕರಿಸಿ ದಂಪತಿಗಳನ್ನು ಆಶೀರ್ವದಿಸಿ ಬಂದಿದ್ದರಂತೆ. ಭಿಕ್ಷದಾರ್ಯರ ಆಶೀರ್ವಾದದಿಂದ ಆ ಕುಟುಂಬ ಸೌಖ್ಯವಾಗಿತ್ತು. ವ್ಯಾಪಾರ ವ್ಯವಹಾರಗಳು ವೃದ್ಧಿಸಿದ್ದವು. ಹಾಗಾಗಿ ಅವರಿಗೆ ದೇವನೂರು ಮಠದ ಬಗ್ಗೆ ಹಾಗೂ ಭಿಕ್ಷದಾರ್ಯರ ಬಗ್ಗೆ ಅಪಾರವಾದ ಭಕ್ತಿಗೌರವಗಳಿದ್ದವು. ಈ ದಂಪತಿಗಳು ಪ್ರತಿನಿತ್ಯ ಭಿಕ್ಷದ ಗುರುಗಳು ತಮ್ಮ ಮನೆಗೆ ಬಂದಾಗ ಕುಳಿತಿದ್ದ ಚಾಪೆಯನ್ನು ಪೂಜಿಸುತ್ತಿದ್ದರಂತೆ. ಅಂದರೆ ಆ ಚಾಪೆಯಲ್ಲೇ ಭಿಕ್ಷದ ಗುರುಗಳಿರುವುದನ್ನು ನಂಬಿದ್ದ ಪರಮ ನಿಷ್ಠಾವಂತ ಭಕ್ತರಿವರು. ಇವರು ತೋಂಟದಾರ್ಯರಿಗೆ ಮೂರುನೂರು ರೂಪಾಯಿಗಳನ್ನು ಕೊಡಲು ಮುಂದೆ ಬಂದ ವಿಷಯ ತಿಳಿದ ತೋಂಟದಾರ್ಯರು ಮತ್ತೆ ಇವರ ಬಳಿ ಸಿದ್ದರಾಮ ಸ್ವಾಮಿಗಳವರನ್ನೇ ಕಳಿಸಿದರಂತೆ. ಆಗ ಸಿದ್ಧರಾಮ ಸ್ವಾಮಿಗಳು ಶ್ರೀರಂಗಪಟ್ಟಣಕ್ಕೆ ಹೋಗಿ ಆ ಶರಣ ದಂಪತಿಗಳಿಂದ ಮೂರುನೂರು ರೂಪಾಯಿ ಕಾಣಿಕೆ ಸ್ವೀಕರಿಸಿ ಗುರುಗಳಿಗೆ ನೀಡಿದರಂತೆ. ಹೀಗೆ ಮೂರು ಸಾವಿರ ರೂಪಾಯಿಗಳನ್ನು ಹೊಂದಿಸಿ ತೋಂಟದಾರ್ಯರು ಕುದೇರಿನ ಆ ಕುಟುಂಬದವರಿಗೆ ನೀಡಿ ಅವರಿದ್ದ ಸ್ಥಳವನ್ನು ಪಡೆದುಕೊಂಡರು.

1942ರ ಜೂನ್ 8ರಂದು ಮೈಸೂರಿನ ಖಿಲ್ಲೆ ಮೊಹಲ್ಲಾ ಬಸವೇಶ್ವರ ರಸ್ತೆಯಲ್ಲಿನ ಮನೆ ನಂಬರ್ 657ರಲ್ಲಿರುವ ಒಂದು ಸಾಧಾರಣ ಹೆಂಚಿನ ಮನೆ, ಪೂರ್ವಕ್ಕೆ ವಿಶಾಲವಾದ ಖಾಲಿ ಜಾಗ, ಒಂದು ಬಾವಿ, ಒಂದು ಬೇಲದ ಮರ ಸೇರಿದಂತೆ ಪೂರ್ವಪಶ್ಚಿಮ 175 ಅಡಿ, ದಕ್ಷಿಣೋತ್ತರ 48 ಅಡಿ ಇರುವ ಸ್ಥಳವನ್ನು ಪಾಠಪ್ರವಚನ, ಸತ್ಕಥಾ ಕಾಲಕ್ಷೇಪ, ಶಿವಾರಾಧನೆ ಮೊದಲಾದ ಸದುದ್ದೇಶಗಳಿಗೆ ಅನುಕೂಲವಾಗಲೆಂದು ಕುದೇರಿನ ಚನ್ನವೀರಮ್ಮ, ಗುರುಸ್ವಾಮಿಗಳು, ಚನ್ನವೀರಪ್ಪ ಮತ್ತು ಕುಟುಂಬದವರಿಂದ ತೋಂಟದಾರ್ಯ ಸ್ವಾಮಿಗಳವರ ಹೆಸರಿಗೆ ನೋಂದಾಯಿಸಲಾಯಿತು. (ಪೂರ್ವಕ್ಕೆ ನಾಲೆ, ಪಶ್ಚಿಮಕ್ಕೆ ಬಸವೇಶ್ವರ ರಸ್ತೆ, ದಕ್ಷಿಣಕ್ಕೆ ಚೌಕಿಮಠ ಹಾಗೂ ಉತ್ತರಕ್ಕೆ ರಸ್ತೆ) ಅನಂತರ ಆ ಕುಟುಂಬದವರು ತೋಂಟದಾರ್ಯ ಸ್ವಾಮಿಗಳವರಲ್ಲಿ ಒಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಅದೇನೆಂದರೆ, ನಾವು ತಮಗೆ ಕೊಟ್ಟಿರುವ ಈ ಮನೆಗೆ ಕುದೇರು ಮಠವೆಂದು ನಾಮಕರಣ ಮಾಡಿ ತಮ್ಮ ಊರಿನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ತುಂಬಾ ಉದಾರಿಗಳಾದ ಶ್ರೀಗಳು ಭಕ್ತರ ಆ ಬೇಡಿಕೆಯನ್ನು ಮನ್ನಿಸಿ ತಾವು ಕೊಂಡುಕೊಂಡ ಆ ಮನೆಗೆ “ಶ್ರೀ ಕುದೇರು ಮಠ’ವೆಂದು ನಾಮಕರಣ ಮಾಡುತ್ತಾರೆ. ಹೀಗೆ ಪರ್ವತ ಸ್ವಾಮಿಗಳಿದ್ದ ಮನೆ ಕುದೇರು ಮಠವಾಗಿ ನಾಮಕರಣಗೊಂಡಿತು. ಹಾಗಾಗಿ ಕುದೇರು ಮಠದ ಸಂಸ್ಥಾಪಕರು ದೇವನೂರು ಮಠದ ಶ್ರೀ ತೋಂಟದಾರ್ಯ ಸ್ವಾಮಿಗಳೇ ಆಗಿದ್ದಾರೆ.

ಕುದೇರು ಗ್ರಾಮಕ್ಕೂ ಮಹಾತ್ಮ ಶ್ರೀ ಗುರುಮಲ್ಲೇಶ್ವರರಿಗೂ ಅವಿನಾಭಾವ ಸಂಬಂಧವಿತ್ತು. ಆ ಗ್ರಾಮದ ವ್ಯಾಪಾರಸ್ಥರಾದ ಶ್ರೀ ಕಿನಾರಿ ಸುಬ್ಬಣ್ಣ ಮತ್ತು ಶ್ರೀಮತಿ ಪಾರ್ವತಮ್ಮನವರು ಗುರುಮಲ್ಲೇಶ್ವರರ ನೆಚ್ಚಿನ ಶಿಷ್ಯರು, ಶ್ರೀಗಳು ಕುದೇರಿಗೆ ಹೋದಾಗಲೆಲ್ಲಾ ಇವರ ಮನೆಯಲ್ಲೇ ವಾಸ್ತವ್ಯ. ಗುರುಗಳಿದ್ದ ಮೇಲೆ ಅಲ್ಲಿ ಶರಣತತ್ವ ಚಿಂತನ ಮಂಥನ, ಭಜನೆ, ಪ್ರಸಾದದ ವ್ಯವಸ್ಥೆಗಳು ವಿಶೇಷವಾಗಿದ್ದವು. ಇವರ ಮನೆಯಲ್ಲೇ ಗುರುಮಲ್ಲೇಶ್ವರರು ಹೋಳಿಗೆ ಪವಾಡ ಮಾಡಿದ್ದರೆಂದು ಭಕ್ತರು ಹೇಳುತ್ತಾರೆ. ಸಂತೆಮರಳ್ಳಿ ಸಂತೆಗೆ ಬರುವ ವೀರಶೈವ ಲಿಂಗಾಯಿತರು ಯಾರಾದರೂ ಎದೆಯಲ್ಲಿ ಲಿಂಗ ಧರಿಸದೆ ಸುಬ್ಬಣ್ಣನವರಿಗೆ ಕಣ್ಣಿಗೆ ಬಿದ್ದರೆ, ಅವರನ್ನು ಹತ್ತಿರಕ್ಕೆ ಕರೆದು ವಿವೇಕ ಹೇಳಿ ಲಿಂಗ ವಸ್ತ್ರವನ್ನು ಉಚಿತವಾಗಿ ನೀಡಿ ದ್ರಾಕ್ಷಿ ಹಣ್ಣಿನ ಪ್ರಸಾದ ಕೊಟ್ಟು ಇನ್ನು ಮುಂದೆ ಕಾಯಕದ ಜೊತೆಗೆ ಲಿಂಗಪೂಜೆಯನ್ನು ಮಾಡಿ ಒಳ್ಳೆಯದಾಗುತ್ತದೆಂದು ಮಾರ್ಗದರ್ಶನ ಮಾಡುತ್ತಿದ್ದರು. ಗುರುಮಲ್ಲೇಶ್ವರರು ಆಗಾಗ್ಗೆ ಕುದೇರು ಗ್ರಾಮಕ್ಕೆ ಹೋಗುತ್ತಿದ್ದುದು ಪ್ರತೀತಿ. ಇವರ ನಂತರ ಶ್ರೀಮಠದ ಗುರುಪರಂಪರೆಯ ಭಿಕ್ಷದಾರ್ಯರು, ತೋಂಟದಾರ್ಯರು ಸಹ ಕುದೇರಿಗೆ ಹೋಗಿ ಭಕ್ತರ ಕಷ್ಟಸುಖಗಳಲ್ಲಿ ಭಾಗಗಳಾಗುತ್ತಿದ್ದುದರಿಂದ ದೇವನೂರು ಮಠದ ಬಗ್ಗೆ ಕುದೇರಿನ ಗ್ರಾಮಸ್ಥರಿಗೆ ಅಪಾರವಾದ ಭಕ್ತಿಗೌರವ.

ಕೆಲವರು ತಮಗೆ ಸಹಾಯ ಮಾಡಿದವರನ್ನು ಸ್ಮರಿಸುವ ಸಲುವಾಗಿ ತಾವು ಏನೇ ಸೇವಾಕಾರ್ಯ ಮಾಡುತ್ತಿದ್ದರೂ, ತಮಗೆ ಸಹಕಾರ ನೀಡಿದವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎನ್ನುವ ಉದ್ದೇಶದಿಂದ ಅವರ ಹೆಸರನ್ನು ಯಾವುದಾದರು ಕಟ್ಟಡ ಅಥವಾ ಸಂಸ್ಥೆಗೆ ನಾಮಕರಣ ಮಾಡುತ್ತಾರೆ. ಉದಾಹರಣೆಗೆ ಶ್ರೀ ಸುತ್ತೂರು ಕ್ಷೇತ್ರದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ತಾವು ಸ್ಥಾಪಿಸಿದ ನೂರಾರು ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿಗೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು (ಎಸ್.ಜೆ.ಸಿ.ಇ.) ಎಂದು ನಾಮಕರಣ ಮಾಡಿದ್ದಾರೆ. ಕಾರಣ ಮೈಸೂರಿನ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಜೆಎಸ್‌ಎಸ್‌ ಸಂಸ್ಥೆಯ ಶಾಲಾಕಾಲೇಜುಗಳನ್ನು ಆರಂಭಿಸಲು ಸಾಕಷ್ಟು ಭೂಮಿಯನ್ನು ರಿಯಾಯಿತಿ ದರದಲ್ಲಿ ನೀಡಿ ಅಗತ್ಯವಾದ ಸಹಕಾರವನ್ನು ನೀಡಿದ್ದರು. ಸಾಮಾನ್ಯವಾಗಿ ಸುತ್ತೂರು ಮಠದ ವಿದ್ಯಾಸಂಸ್ಥೆಗಳ ಹೆಸರು ಜೆಎಸ್‌ಎಸ್‌ ಎಂದೇ ಆಗಿರುತ್ತದೆ. ಹಾಗೆಯೇ, ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿಗೆ ದೊಡ್ಡಹುಂಡಿ ಭೋಗಪ್ಪನವರು ಸ್ಥಳ ದಾನ ಮಾಡಿದ್ದರಿಂದ ಸರ್ಕಾರ ಆ ಕಾಲೇಜಿಗೆ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಜೂನಿಯರ್ ಕಾಲೇಜು ಎಂದು ನಾಮಕರಣ ಮಾಡಿದೆ.

1942ರಿಂದ ಅಧಿಕೃತವಾಗಿ ಮೈಸೂರಿನ ಶ್ರೀ ಪರ್ವತಸ್ವಾಮಿಯವರ ಮನೆ ಕುದೇರು ಮಠವಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಸಂಸ್ಥಾಪಕರು ಪೂಜ್ಯನೀಯ ಶ್ರೀ ತೋಂಟದಾರ್ಯ ಸ್ವಾಮಿಗಳವರು. ಶ್ರೀಗಳ ಆಶಯ ಮೊದಲಿಗೆ ತಾವು ಮೈಸೂರು ಭಾಗದ ಭಕ್ತರ ಕಾರ್ಯಗಳಿಗೆ ಬಂದಾಗ ತಮ್ಮದೇ ಆದ ಮಠದಲ್ಲಿ ತಂಗುವುದಾಗಿತ್ತು. ಎರಡನೆಯದಾಗಿ, ಶಿಕ್ಷಣ ಪ್ರೇಮಿಗಳಾದ ಶ್ರೀಗಳು ಮೈಸೂರಿಗೆ ಓದಲು ಬರುವ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಸತಿ ಮತ್ತು ಪ್ರಸಾದವನ್ನು ಕಲ್ಪಿಸುವುದಾಗಿತ್ತು. ಪ್ರಾಯಶಃ ಶ್ರೀಗಳ ಕಾರ್ಯದೊತ್ತಡ ಬಹಳವಾದುದರಿಂದ ತಕ್ಷಣದಲ್ಲಿ ಈ ಮಠದಲ್ಲಿ ವಿದ್ಯಾರ್ಥಿನಿಲಯ ಮಾಡಲಾಗಿರಲಿಲ್ಲ. ಆದರೆ, 1958ರಲ್ಲಿ ದೇವನೂರು ಮಠದಿಂದ ಶ್ರೀ ಕುದೇರು ಮಠಕ್ಕೆ ಬಂದ ಶ್ರೀ ಗುರುಸ್ವಾಮಿಗಳು ತೋಂಟದಾರ್ಯರ ಒಡನಾಡಿಗಳು ಹಾಗೂ ನಿಕಟವರ್ತಿಗಳಾಗಿದ್ದವರು. ದೇವನೂರಿನ ಮಠದ ಗದ್ದುಗೆ ಪೂಜಾಕಾಯಕ ನಿರತರಾಗಿದ್ದವರು. ಇವರು ತೋಂಟದಾರ್ಯರ ಎರಡನೆಯ ಆಶಯವನ್ನು ಪೂರ್ಣಗೊಳಿಸಲು ತಾವು ಕುದೇರು ಮಠದಲ್ಲಿ ಹತ್ತಾರು ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಿದರು. ಕಂತೆಭಿಕ್ಷದ ಕಾಯಕದ ಜೊತೆಗೆ ಗ್ರಾಮಾಂತರ ಪ್ರದೇಶಗಳ ಭಕ್ತರಿಂದ ಧಾನ್ಯಭಿಕ್ಷೆ ಮಾಡಿ ಸಣ್ಣ ಪ್ರಮಾಣದಲ್ಲಿ ವಿದ್ಯಾರ್ಥಿನಿಲಯವನ್ನು ಆರಂಭಿಸಿ ಮುನ್ನಡೆಸಿದರು.

1971ರಲ್ಲಿ ಮಾದಾಪಟ್ಟಣ ವಿರಕ್ತಮಠದ ಶ್ರೀ ಚನ್ನಬಸವಸ್ವಾಮಿಗಳ ಆಪ್ತಸಹಾಯಕರಾಗಿ ಅಪಾರ ಅನುಭವವನ್ನು ಹೊಂದಿದ್ದ ಶ್ರೀ ಗುರುಲಿಂಗಸ್ವಾಮಿ ಗಳವರನ್ನು ಭಕ್ತರು ಕುದೇರು ಮಠಕ್ಕೆ ಕರೆತಂದು ಶ್ರೀ ಮಠದ ಜವಾಬ್ದಾರಿಯನ್ನು ವಹಿಸಿದ ನಂತರ ಶ್ರೀ ಕುದೇರುಮಠ ಸರ್ವರೀತಿಯಲ್ಲೂ ಅಭಿವೃದ್ಧಿಗೊಳ್ಳತೊಡಗಿತು.ಶ್ರೀಗಳು ತಮ್ಮ ಸೇವಾವಧಿಯಲ್ಲಿ ಮಠದ ಹಳೆಯ ನಾಡಂಚಿನ ಮನೆಯನ್ನು ತೆಗೆದು, ನೂತನವಾಗಿ ಸಿಮೆಂಟ್ ಕಟ್ಟಡವನ್ನು ನಿರ್ಮಿಸಿದರು. ವಿದ್ಯಾರ್ಥಿನಿಲಯಕ್ಕಾಗಿ ಹತ್ತಾರು ಕೊಠಡಿಗಳು, ಅಡುಗೆ ಮನೆ, ಪ್ರಸಾದನಿಲಯ, ಶೌಚಾಲಯ, ಕಾಂಪೌಂಡ್ ಮೊದಲಾದ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಿದರು. ಆ ಬಳಿಕ 1978-79ರಲ್ಲಿ ಶ್ರೀ ತೋಂಟದಾರ್ಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಶ್ರೀ ತೋಂಟದಾರ್ಯಸ್ವಾಮಿ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಿ ಮುನ್ನಡೆಸಿದರು.

1991ರ ನಂತರ ಇವರ ಕರಕಮಲಸಂಜಾತರಾದ ಶ್ರೀ ಗುರುಶಾಂತಸ್ವಾಮಿಗಳು ಶ್ರೀಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಮೈಸೂರು ನಗರದ ಆಲನಹಳ್ಳಿ ಬಡಾವಣೆಯಲ್ಲಿ ಹತ್ತುಗುಂಟೆ ಜಾಗವನ್ನು ಹೊಸದಾಗಿ ಪಡೆದು ಕಟ್ಟಡ ನಿರ್ಮಿಸಿ ಶ್ರೀ ತೋಂಟದಾರ್ಯ ಸ್ವಾಮಿ ಮಠ, (ಕುದೇರು ಶಾಖಾ ಮಠ) ಎಂದು ನಾಮಕರಣ ಮಾಡಿದ್ದಾರೆ. ಅದೇ ಮಠದ ಆವರಣದಲ್ಲಿ ಸುಮಾರು ಎರಡು ಕೋಟಿ ಖರ್ಚಿನಲ್ಲಿ ಶ್ರೀ ತೋಂಟದಾರ್ಯ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 20 ಕೊಠಡಿಗಳು, ಶೌಚಾಲಯ, ಸ್ನಾನದ ಗೃಹ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಶ್ರೀಮಠದಲ್ಲಿ ಮಹಾತ್ಮ ಗುರುಮಲ್ಲೇಶ್ವರರ ಶಿಲಾಪ್ರತಿಮೆಯನ್ನು ಸ್ಥಾಪಿಸಿದ್ದಾರೆ. 2013ರಲ್ಲಿ ಇಮ್ಮಡಿ ಗುರುಲಿಂಗ ಸ್ವಾಮಿಗಳವರನ್ನು ಭಕ್ತರು ಹಾಗೂ ಇತರೆ ಮಠಾಧಿಪತಿಗಳ ಒಪ್ಪಿಗೆಯಂತೆ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡಿದ್ದಾರೆ.

ಕಿರಿಯ ಶ್ರೀಗಳಾದ ಶ್ರೀ ಇಮ್ಮಡಿ ಗುರುಲಿಂಗಸ್ವಾಮಿಗಳು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ತುಂಬಾ ಕ್ರಿಯಾಶೀಲರಾಗಿ ಶ್ರೀಮಠದ ಕೆಲಸಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಕುದೇರು ಮಠದ ವಿದ್ಯಾರ್ಥಿನಿಲಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಭಕ್ತರ ಬಿನ್ನಹಗಳನ್ನು ಪೂರೈಸುತ್ತಾ ಅವರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.

ಶ್ರೀಮಠದಲ್ಲಿ ಪ್ರತಿವರ್ಷ ಕಾರ್ತೀಕ ಸೋಮವಾರಗಳಂದು ಪುರಾಣ ಪ್ರವಚನ, ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಮೈಸೂರು ನಗರದಲ್ಲಿ ಮಹಾತ್ಮ ಶ್ರೀಗುರುಮಲ್ಲೇಶ್ವರರ ವಾರ್ಷಿಕ ಪ್ರಮಥ ಗಣಾರಾಧನೆ, ಲಿಂ.ಶ್ರೀ ತೋಂಟದಾರ್ಯ ಸ್ವಾಮಿಗಳು ಹಾಗೂ ಲಿಂ.ಶ್ರೀ ಗುರುಲಿಂಗಸ್ವಾಮಿಗಳವರ ವಾರ್ಷಿಕ ಪುಣ್ಯಾರಾಧನೆಗಳನ್ನು ಆಯೋಜಿಸಿ ನಾಡಿನ ವಿವಿಧ ಮಠಾಧೀಶರುಗಳನ್ನು ಹಾಗೂ ಗಣ್ಯಮಹನೀಯರನ್ನು ಆಹ್ವಾನಿಸಿ, ಸಹಸ್ರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಂಡು ಬರಲಾಗುತ್ತಿದೆ.

ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಶ್ರೀಮಠಕ್ಕೆ ಬರುವ ಭಕ್ತಾದಿಗಳಿಗೂ ನಿತ್ಯಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಶ್ರೀಮಠದಲ್ಲಿ ಮಹಾತ್ಮ ಶ್ರೀ ಗುರುಮಲ್ಲೇಶ್ವರರು ಅನುಷ್ಠಾನಕ್ಕೆ ತಂದ ಕಂತೆಭಿಕ್ಷದ ಕಾಯಕವನ್ನು ಅನೂಚಾನವಾಗಿ ಮುಂದುವರಿಸಿ ಕೊಂಡು ಬರಲಾಗಿದೆ. ಆರಾಧನಾ ಸಂದರ್ಭದಲ್ಲಿ ಭಕ್ತರಿಂದ ಕಾಣಿಕೆ ಸಂಗ್ರಹವನ್ನು ಹಾಗೂ ಸುಗ್ಗಿಯ ವೇಳೆಯಲ್ಲಿ ದವಸಧಾನ್ಯಗಳನ್ನು ಸಂಗ್ರಹಿಸುವ ಮೂಲಕ ಶ್ರೀಮಠ ನಿರಂತರವಾಗಿ ಭಕ್ತರ ಸಂಪರ್ಕವನ್ನು ಹೊಂದಿದೆ. ಶ್ರೀಮಠಕ್ಕೆ ಭಕ್ತರೇ ಆಸ್ತಿ, ಮಠವೇ ಭಕ್ತರದು. ಒಮ್ಮೆ ಗುರುಗಳು ಸಭೆಯೊಂದರಲ್ಲಿ ಮಾತನಾಡುತ್ತಾ “ಈ ಮಠ ನಿಮ್ಮದು, ನಾವು ಕಾವಲುಗಾರರ” ಎಂದು ಹೇಳುವ ಮೂಲಕ ಕುದೇರು ಮಠವನ್ನು ಭಕ್ತರ ಮಠ, ಇದು ಭಕ್ತಿಯ ಮಠವೆಂದೆನಿಸಿದ್ದಾರೆ.

ಹೀಗೆ ಶ್ರೀಮಠವು ಭಕ್ತರ ಸಹಕಾರದಿಂದ ತನ್ನ ಇತಿಮಿತಿಯಲ್ಲಿ ಮೈಸೂರು ನಗರದಲ್ಲಿ ಕಾಯಕ ಮತ್ತು ದಾಸೋಹ ಮಾಡುತ್ತಾ ತನ್ನದೇ ಆದ ಹೆಸರನ್ನು ಮಾಡಿದೆ. ಇಲ್ಲಿನ ಶ್ರೀಗಳು ಹೇಳುವುದು ಒಂದೇ ಮಾತು. “ಈ ಮಠದ ಬೆಳವಣಿಗೆಯಲ್ಲಿ ನಮ್ಮ ಪಾತ್ರವೇನಿಲ್ಲ, ಎಲ್ಲಾ ಆ ಮಹಾತ್ಮ ಗುರುಮಲ್ಲೇಶ್ವರ ಮಹಾಪ್ರಭುಗಳದ್ದು” ಎಂಬುದು. ಹಾಗಾಗಿ ಈ ಭಾಗದಲ್ಲಿ ಗುರುಮಲ್ಲೇಶ ಎಂಬ ನಾಮವೇ ಶಕ್ತಿ, ಭಕ್ತಿ ಮತ್ತು ಮುಕ್ತಿಯಾಗಿದೆ.

ವಿಶೇಷವೆಂದರೆ, ಕುದೇರು ಮಠದ ಸಂಸ್ಥಾಪಕರಾದ ಪೂಜ್ಯಶ್ರೀ ತೋಂಟದಾರ್ಯ ಸ್ವಾಮಿಗಳವರು ಸಾಕ್ಷಾತ್ ಶ್ರೀ ಗುರುಮಲ್ಲೇಶ್ವರರ ಕೃಪಾಶೀರ್ವಾದದಿಂದ ಜನಿಸಿದವರು. ಶ್ರೀಗಳು ದೇವನೂರು ಮಠದ ಮೂರನೆಯ ಪೀಠಾಧೀಶರಾಗಿ ಮಠವನ್ನು ಹಾಗೂ ಭಕ್ತ ಸಮುದಾಯವನ್ನು ಮುನ್ನಡೆಸಿದ ಮಹಾನುಭಾವರು. ಗ್ರಾಮೀಣ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಹಾಗೂ ಭಕ್ತರು ಮೈಸೂರಿನ ವ್ಯವಹಾರಗಳಿಗೆ ಬಂದಾಗ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವ ದೂರದೃಷ್ಟಿಯಿಂದ ಸ್ಥಾಪಿಸಲ್ಪಟ್ಟ ಮಠವೇ ಮೈಸೂರಿನ ಕುದೇರು ಮಠವಾಗಿದೆ. ಹಾಗಾಗಿ ಮಹಾತ್ಮ ಗುರುಮಲ್ಲೇಶ್ವರರ ಆಶೀರ್ವಾದದ ಪ್ರಭಾವ ಈ ಮಠದ ಮೇಲಿದೆ. ಹಾಗಾಗಿ ಮಹಾತ್ಮ ಶ್ರೀ ಗುರು ಮಲ್ಲೇಶ್ವರರನ್ನು ಹೊರತುಪಡಿಸಿ ಕುದೇರು ಮಠದ ಇತಿಹಾಸ ಪೂರ್ಣವಾಗಲಾರದು.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ಗುರುಶಾಂತಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

  • ಕಾರ್ತಿಕ ಮಾಸ ಪೂಜೆ
  • ನಿತ್ಯಪ್ರಸಾದದ ವ್ಯವಸ್ಥೆ
  • ಪ್ರತಿವರ್ಷ ಕಾರ್ತೀಕ ಸೋಮವಾರಗಳಂದು ಪುರಾಣ ಪ್ರವಚನ, ವಿಶೇಷ ಉಪನ್ಯಾಸ ಕಾರ್ಯಕ್ರಮ
  • ಪ್ರತಿವರ್ಷ ಮೈಸೂರು ನಗರದಲ್ಲಿ ಮಹಾತ್ಮ ಶ್ರೀಗುರುಮಲ್ಲೇಶ್ವರರ ವಾರ್ಷಿಕ ಪ್ರಮಥ ಗಣಾರಾಧನೆ, ಲಿಂ.ಶ್ರೀ ತೋಂಟದಾರ್ಯ ಸ್ವಾಮಿಗಳು ಹಾಗೂ ಲಿಂ.ಶ್ರೀ ಗುರುಲಿಂಗಸ್ವಾಮಿಗಳವರ ವಾರ್ಷಿಕ ಪುಣ್ಯಾರಾಧನೆ

ಸಾಮಾಜಿಕ ಕಾರ್ಯಗಳು:

  • ಶ್ರೀ ಕುದೇರು ಮಠದ ವಿದ್ಯಾರ್ಥಿನಿಲಯ
  • ಶ್ರೀ ತೋಂಟದಾರ್ಯ ವಿದ್ಯಾಸಂಸ್ಥೆ
  • ಶ್ರೀ ತೋಂಟದಾರ್ಯಸ್ವಾಮಿ ಸಂಸ್ಕೃತ ಪಾಠಶಾಲೆ
  • ಶ್ರೀ ತೋಂಟದಾರ್ಯಸ್ವಾಮಿ ಪ್ರಾರ್ಥನಾ ಮಂದಿರ
  • ವಿದ್ಯಾರ್ಥಿಗಳ ಅನುಕೂಲಕ್ಕಾಗಿ 20 ಕೊಠಡಿಗಳು, ಶೌಚಾಲಯ, ಸ್ನಾನದ ಗೃಹ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ
  • ಕುದೇರು ಮಠದಲ್ಲಿ ಹತ್ತಾರು ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಿದರು. ಕಂತೆಭಿಕ್ಷದ ಕಾಯಕದ ಜೊತೆಗೆ ಗ್ರಾಮಾಂತರ ಪ್ರದೇಶಗಳ ಭಕ್ತರಿಂದ ಧಾನ್ಯಭಿಕ್ಷೆ ಮಾಡಿ ಸಣ್ಣ ಪ್ರಮಾಣದಲ್ಲಿ ವಿದ್ಯಾರ್ಥಿನಿಲಯವನ್ನು ಆರಂಭಿಸಿ ಮುನ್ನಡೆಸಿದರು.