ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠ, ಚಾಮರಾಜನಗರ

ವಿಳಾಸ:

ನಿ.ಪ್ರ.ಸ್ವ. ಶ್ರೀ ಚನ್ನಬಸವಸ್ವಾಮಿಗಳವರು, ಶ್ರೀ ಸಿದ್ಧಮಲ್ಲೇಶ್ವರ ವಿರಕ್ತಮಠ ರಾಮಸಮುದ್ರ ರಸ್ತೆ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ
ಮೊ. +919731328279

ಮಠದ ವಿವರ:

ಚಾಮರಾಜನಗರ ಟೌನ್‌ನಲ್ಲಿರುವ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠವು 1958 ರಲ್ಲಿ ಸ್ಥಾಪನೆಯಾಗಿದ್ದು, ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಗತಿಯ ಪ್ರಮುಖ ಕೇಂದ್ರವಾಗಿದೆ. ಊಟಿಯ ಕಾಟೇರಿಯಿಂದ ಬಂದಂತಹ ಶ್ರೀ ನಿ ಪ್ರ ಸ್ವ ಶ್ರೀ ಬಸವರಾಜಸ್ವಾಮಿಗಳವರು ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ 1958ರಲ್ಲಿ ಮಠ ಸ್ಥಾಪನೆ ಮಾಡಿ,ದೇವನೂರಿನಲ್ಲಿ ಒಣ ಭಿಕ್ಷದ ಕಾಯಕ ಮಾಡುತ್ತಿದ್ದ ಶ್ರೀ ಸಿದ್ದಬಸವರಾಜಸ್ವಾಮಿಗಳನ್ನು ಕರೆತಂದು ಶ್ರೀ ಮಠದ ಎರಡನೇ ಪೀಠಾಧಿಕಾರಿಗಳಾಗಿ ಕಾರ್ಯನಿರ್ವಹಿಸಲು ನೇಮಿಸಿ ಲಿಂಗದೊಳಗಾದರು. ನಂತರ ಶ್ರೀ ಸಿದ್ದಬಸವರಾಜಸ್ವಾಮಿಗಳು ಶ್ರೀಮಠದ ಅಭಿವೃದ್ಧಿ ಪಡಿಸಿ,ಶ್ರೀಮಠದಲ್ಲಿ ಜನರ ಅನುಕೂಲಕ್ಕೆ ಅನುಭವ ಮಂಟಪ ನಿರ್ಮಾಣ ಮಾಡಿ ಮತ್ತು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರೆಸುತ್ತ ಬಂದರು,ಪೂಜ್ಯರಿಗೆ ಆರೋಗ್ಯದ ಸಮಸ್ಯೆಯಾದ ಕಾರಣ 2011 ರಲ್ಲಿ ಮುಂದಿನ ಪೀಠಾದೀಪತಿಗಳನ್ನು ಶ್ರೀ ಮಠದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರೀ ಚನ್ನಬಸವಸ್ವಾಮಿಗಳನ್ನು ನೇಮಿಸಿ ಲಿಂಗದೊಳಗಾದರು. ಪ್ರಸ್ತುತ ಪೀಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳು ಪೂಜ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠದ ಅಭಿವೃದ್ಧಿಪಡಿಸುತ್ತಿದ್ದಾರೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಬಸವರಾಜ ಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಸಿದ್ದಬಸವರಾಜ ಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ಚನ್ನಬಸವ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಶ್ರೀ ಬಸವರಾಜಸ್ವಾಮಿಗಳು ಮೊದಲ ಪಟ್ಟಾಧ್ಯಕ್ಷರಾಗಿದ್ದು, ಧಾರ್ಮಿಕ ಕಾರ್ಯಗಳ ಜೊತೆಗೆ ಮಠದ ಅಭಿವೃದ್ದಿಗೆ ಗಮನ ಹರಿಸಿದರು. ೧೯೬೨ ರಲ್ಲಿ ಅವರು ಶ್ರೀ ಬಸವಜಯಂತಿಯನ್ನು ಆಚರಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಬುನಾದಿ ಹಾಕಿದರು. ಶ್ರೀ ಮಠವು ಗ್ರಾಮಾಂತರ ಬಸವ ಜಯಂತೋತ್ಸವ,ಕಾರ್ತೀಕೋತ್ಸವ, ಶಿವರಾತ್ರಿ ,ಪೂಜ್ಯರ ಸ್ಮರಣೋತ್ಸವ,ತಿಂಗಳ ಅಮಾವಾಸ್ಯೆ ಭಜನೆ ಕಾರ್ಯಕ್ರಮ ಹಾಗೂ ಇತರ ಧಾರ್ಮಿಕ ಕಾರ್ಯಗಳನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ.

ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳು:

ಶ್ರೀ ಸುತ್ತೂರು ಮಠದ ರಾಜಗುರುತಿಲಕ ಡಾ. ಶಿವರಾತ್ರಿರಾಜೇಂದ್ರಸ್ವಾಮಿಗಳ ಸಾನ್ನಿಧ್ಯದಲ್ಲಿ ಉಪರಾಷ್ಟ್ರಪತಿಗಳಾದ ಬಿ ಡಿ ಜತ್ತಿ ಅವರ ಅಧ್ಯಕ್ಷತೆಯಲ್ಲಿ 1961 ರಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಲಾಯಿತು. ಈ ಶಾಲೆಯ ಮೂಲಕ ಗ್ರಾಮಾಂತರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.