ಶಿಲಾ ಮಠ

ವಿಳಾಸ:

ನಿ.ಪ್ರ.ಸ್ವ. ಶ್ರೀ ಮಹಾ೦ತ ದೇಶಿಕೇ೦ದ್ರ ಸ್ವಾಮಿಗಳು, ಶಿಲಾಮಠ, ಕ೦ತೆ ಮಾದಪ್ಪನ ಬೆಟ್ಟ, ಹುಲ್ಲಹಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ: +919611768980

ಮಠದ ವಿವರ:

ನಂಜನಗೂಡು ತಾಲ್ಲೂಕಿನ ಶಿಲಾಮಠ ಶ್ರೀಕಂತೆಮಹದೇಶ್ವರಸ್ವಾಮಿ ಬೆಟ್ಟವು ಹುಲ್ಲಹಳ್ಳಿ ಹೋಬಳಿಯ ಪಶ್ಚಿಮಕ್ಕೆ ಹನ್ನೆರಡು ಕಿಲೋಮೀಟರ್ ದೂರದಲ್ಲಿ, ವಿರಕ್ತ ಪರಂಪರೆಯ ಮಠ ಬೃಗು (ನುಗು) ನದಿಯ ತೀರದಲ್ಲಿ ಪವಿತ್ರ ಮತ್ತು ಪ್ರಶಾಂತ ಬೆಟ್ಟದ ಮೇಲೆ ಸ್ಥಾಪಿತವಾಗಿದೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಎಡೆಯೂರು ಸಿದ್ದಲಿಂಗ ಶಿವಯೋಗಿಗಳವರ ಸಮಕಾಲೀನವರಾದ ಶ್ರೀಕಂತೆಶಿವಯೋಗಿಗಳಿಂದ ಸ್ಥಾಪಿತವಾಗಿದೆ. ಮಲೆಮಹದೇಶ್ವರರು ಆಗಿನ 900 ಎಕರೆ ಅರಣ್ಯದ ಮಧ್ಯದಲ್ಲಿ ಇದ್ದ ಬೆಟ್ಟದಲ್ಲಿ ಬಂದು ಶ್ರೀಕಂತೆಸ್ವಾಮಿಗಳವರಿಗೆ ಆಶೀರ್ವದಿಸಿದ ಕಾರಣ ಕಂತೆಮಹದೇಶ್ವಸ್ವಾಮಿ ಬೆಟ್ಟ ಎಂದು ಪ್ರಸಿದ್ದಿ ಪಡೆಯಿತು. ಕಂತೆಸ್ವಾಮಿಗಳು ಪುರಾತನ ಗವಿಯಲ್ಲಿ ತಪಸ್ಸನ್ನು ಮಾಡುತ್ತಿದ್ದರು. ಮಂಗಳೂರು ಗ್ರಾಮದ ಪಕ್ಕದಲ್ಲಿ ಇದ್ದ ಶೈವ, ವೈಷ್ಣವರ ಗಲಭೆಯಿಂದ ಬೇಸತ್ತ ಕಂತೆಸ್ವಾಮಿಗಳು ಉಕ್ಕಿನ ಕಂತೆಯ ಪಾವಾಡವನ್ನು ಮಾಡಿ, ಮಠವನ್ನು ಬಿಟ್ಟು, ಶಾಪವಿಟ್ಟು, ಹುಣಸೂರು ತಾಲ್ಲೋಕು ಮಾದಹಳ್ಳಿ ಉಕ್ಕಿನ ಕಂತೆಮಠದಲ್ಲಿ ಶಿವಯೋಗ ಸಮಾಧಿಯನ್ನು ಹೊಂದಿದರು. ನಂತರ ಮಠವು ಶಿಥಿಲಗೊಂಡಿತ್ತು. ಅದರ ನಂತರ ಶ್ರೀಕ್ಷೇತ್ರಕ್ಕೆ ಶ್ರೀ ಚಿದಾನಂದ ನಂಜುಂಡಶಿವಯೋಗೀಂದ್ರ ಶಿವಯೋಗಿಗಳವರು ಬಂದು ಗವಿಯಲ್ಲಿ ಹಲವು ಕಾಲ ತಪಸ್ಸನ್ನು ಮಾಡಿ, ಬೃಗು ನದಿಯ ತೀರಲ್ಲಿ ಇದ್ದ ಹಳೆಯ ಮಠವನ್ನು, ಅಲ್ಲೇ ಇದ್ದ ಗವಿ ಮತ್ತು ಇನ್ನಿತರ ಎಲ್ಲವನ್ನು ಮುಚ್ಚಿಸಿ ಬೆಟ್ಟದ ಮೇಲೆ ಶಿಲಾಮಠವನ್ನು ಕಟ್ಟಿದರು. ಶ್ರೀ ಚಿದಾನಂದ ನಂಜುಂಡಶಿವಯೋಗಿಂದ್ರ ಶಿವಯೋಗಿಗಳವರು ಹಠಯೋಗವನ್ನು ಸಾಧನೆ ಮಾಡಿದವರು. ಮಹಾತಪಸ್ವಿಗಳು. ಭಕ್ತರಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಈಗಲೂ ಅವರ ಬಗ್ಗೆ ಭಕ್ತರಲ್ಲಿ ಅನಂತ ಭಕ್ತಿಭಾವವನ್ನ ಇಟ್ಟಿಕೊಂಡಿದ್ದಾರೆ. ಇವರು ಹಲವು ವರ್ಷಗಳ ಕಾಲ ಇದ್ದು, 1958ರಂದು ಸಜೀವ ಶಿವಯೋಗ ಸಮಾಧಿಯನ್ನು ಹೊಂದಿದರು. ನಂತರ ಈ ಮಠವನ್ನು ಶ್ರೀ ಮಹಾಂತ ಶಿವಯೋಗಿಗಳು ಹಾಗೂ ಹೊನ್ನಪ್ರಭುಸ್ವಾಮಿಗಳು ಪ್ರಸ್ತುತ ಶ್ರೀ ಮಹಾಂತ ದೇಶಿಕೇಂದ್ರಸ್ವಾಮಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಕಂತೆಯ ಶಿವಯೋಗಿಗಳವರು
  2. ನಿ.ಪ್ರ.ಸ್ವ. ಶ್ರೀ ಚಿದಾನಂದ ನಂಜುಂಡಶಿವಯೋಗಿಂದ್ರ ಶಿವಯೋಗಿಗಳವರು
  3. ನಿ.ಪ್ರ.ಸ್ವ. ಶ್ರೀ ಮಹಾಂತ ಶಿವಯೋಗಿಗಳವರು
  4. ನಿ.ಪ್ರ.ಸ್ವ. ಶ್ರೀ ಹೊನ್ನಪ್ರಭುಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ ಮಹಾಂತ ದೇಶಿಕೇಂದ್ರಸ್ವಾಮಿಗಳು(ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ದೀಪಾವಳಿ ಬಲಿಪಾಡ್ಯಮಿದಿನ ಶ್ರೀ ಕಂತೆಮಹದೇಶ್ವರರ ಜಾತ್ರಾ ಮಹೋತ್ಸವ.
  • ಕಾರ್ತೀಕ ಸೋಮವಾರದಂದು ವಿಶೇಷ ಪೂಜಾ ದೀಪೋತ್ಸವ, ಹುಲಿವಾಹನೋತ್ಸವ ಮತ್ತು ದಾಸೋಹ ಇರುತ್ತದೆ.
  • ಅಮಾವಾಸ್ಯೆ ಮತ್ತು ಪೌರ್ಣಮಿ ದಿನಗಳಲ್ಲಿ ವಿಶೇಷ ಪೂಜಾ ಉತ್ಸವಾದಿಗಳು ಮತ್ತು ದಾಸೋಹ ನಡೆಯುತ್ತದೆ.
  • ವರ್ಷದಲ್ಲಿ ಗುರುಗಳ ವಾರ್ಷಿಕ ಆರಾಧನ ಕಾರ್ಯಕ್ರಮ.
  • ಶ್ರಾವಣ ಮಾಸದ ಬಹುಳ ಚತುರ್ದಶಿಯಂದು ಪೂಜಾ ವಿಧಿವಿಧಾನಗಳು ನಡೆಯುತ್ತವೆ.

ಸಾಮಾಜಿಕ ಕಾರ್ಯಗಳು:

  • ದಾಸೋಹ ಬಡ ವಿದ್ಯಾರ್ಥಿಗಳಿಗೆ ಆಶ್ರಯ
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗೊಳ್ಳುತ್ತಿರುವ ವಿಧ್ಯಾರ್ಥಿಗಳಿಗೆ ಆಶ್ರಯ