ಶ್ರೀ ಕಬ್ಬಿಣಕೊಲೇಶ್ವರ ಮಠ, ಗೋಪಾಲಪುರ

ವಿಳಾಸ:

ಷ.ಬ್ರ.ಸ್ವ. ಶ್ರೀ ಗಂಗಾಧರ ಸ್ವಾಮಿಗಳವರು, ಶ್ರೀ ಕಬ್ಬಿಣಕೋಲೇಶ್ವರ ಮಠ,ಗೋಪಾಲಪುರ, ಕನ್ನೆಗಾಲ ಅಂಚೆ,ಗುಂಡ್ಲುಪೇಟೆ ತಾಲ್ಲೂಕು,ಚಾಮರಾಜನಗರ ಜಿಲ್ಲೆ.
ಮೊ. +919686480923

ಮಠದ ವಿವರ:

ಗೋಪಾಲಪುರದ ಹೊರಭಾಗದ ಪಶ್ಚಿಮದಲ್ಲಿ ಸ್ಥಾಪನೆಯಾಗಿರುವ ಶ್ರೀ ಕಬ್ಬಿಣಕೋಲೇಶ್ವರ ಮಠವನ್ನು, ಶ್ರೀ ಕಬ್ಬಿಣಕೋಲೇಶ್ವರರು ಪ್ರಾರಂಭಿಸಿದರು. ಶ್ರೀ ಶಿವಲಿಂಗ ಶಿವಯೋಗಿಗಳು ಲೋಕಸಂಚಾರ ಮಾಡುವಾಗ ತಮ್ಮ ಕೈಯಲ್ಲಿ ಕಬ್ಬಿಣದ ಕೋಲು ಇಟ್ಟುಕೊಂಡಿರುತ್ತಿದ್ದರು. ಅವರು ಗೋಪಾಲಪುರಕ್ಕೆ ಬಂದು ಈ ಪ್ರಶಾಂತ ಸ್ಥಳದಲ್ಲಿ ತಪಸ್ಸು ನಡೆಸಿದರು. ಜನಪದ ಕಥೆಯ ಪ್ರಕಾರ, ಒಮ್ಮೆ ಮಳೆಯಿಲ್ಲದ ಸಂದರ್ಭದಲ್ಲಿ ಅವರು ಮಳೆ ತರಿಸುವ ಪವಾಡವನ್ನು ಪ್ರದರ್ಶಿಸಿ, ಭಕ್ತರಲ್ಲಿ ಭಕ್ತಿ ಮತ್ತು ನಂಬಿಕೆಯನ್ನು ಎಬ್ಬಿಸಿದರು.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಕಬ್ಬಿಣ ಕೋಲೇಶ್ವರರು
  2. ಷ.ಬ್ರ.ಸ್ವ. ಶ್ರೀ ಜಡೆಸ್ವಾಮಿಗಳು
  3. ಷ.ಬ್ರ.ಸ್ವ. ಶ್ರೀ ಶಿವಲಿಂಗಸ್ವಾಮಿಗಳು
  4. ಷ.ಬ್ರ.ಸ್ವ. ಶ್ರೀ ಪಟ್ಟದ ವೀರಭದ್ರ ಶಿವಾಚಾರ್ಯಸ್ವಾಮಿಗಳು
  5. ಷ.ಬ್ರ.ಸ್ವ. ಶ್ರೀ ಗಂಗಾಧರ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಪ್ರತಿವರ್ಷ ಶ್ರೀ ಕಬ್ಬಿಣಕೋಲೇಶ್ವರರ ಆರಾಧನೆ ದಿನವನ್ನು ಆಚರಿಸಿ, ಧಾರ್ಮಿಕ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನಾಡಿನ ಹಲವು ಮಠಾಧೀಶರು ಹಾಗೂ ಹೆಸರಾಂತ ಉಪನ್ಯಾಸಕರು ಈ ಸಂದರ್ಭದಲ್ಲಿ ಭಾಗವಹಿಸಿ, ಜನರಿಗೆ ಧಾರ್ಮಿಕ ಹಾಗೂ ತಾತ್ವಿಕ ವಿಚಾರಗಳನ್ನು ತಿಳಿಸುತ್ತಾರೆ. ಮಠದಲ್ಲಿರುವ ಕಬ್ಬಿಣದ ಕೋಲು, ಕಮಂಡಲ ಮತ್ತು ಪಾದುಕೆಗಳಿಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ಮಠದ ನಾಲ್ಕು ಗದ್ದುಗೆಗಳಿಗೂ ನಿತ್ಯಪೂಜೆ ನಡೆದು, ಶ್ರಾವಣ, ಕಾರ್ತಿಕ ಹಾಗೂ ಧನುರ್ಮಾಸಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಸಾಮಾಜಿಕ ಕಾರ್ಯಗಳು:

ಶ್ರೀ ಗಂಗಾಧರಸ್ವಾಮಿಗಳ ಮಾರ್ಗದರ್ಶನದಲ್ಲಿ “ಶ್ರೀ ಗಂಗಾಧರೇಶ್ವರ ಪ್ರೌಢಶಾಲೆ” ಪ್ರಾರಂಭಿಸಿ, ಶಾಲಾ ಕಟ್ಟಡ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಬಡಮಕ್ಕಳಿಗಾಗಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲಾಗಿದೆ. ಅನಾಥ ಮಕ್ಕಳ ಆಶ್ರಯಕ್ಕಾಗಿ ಒಂದು ಅನಾಥಾಲಯವನ್ನೂ ಸ್ಥಾಪಿಸಿ, ಸದ್ಯಕ್ಕೆ ಸುಮಾರು 25 ಅನಾಥ ಮಕ್ಕಳಿಗೆ ಆಶ್ರಯ ನೀಡಲಾಗಿದೆ.